Total Pageviews

Monday, September 12, 2011

ಚಿಕ್ಕೆರೆಲಿ ಎದ್ದ, ದೋಡ್ಕೆರೆಲಿ ಬಿದ್ದ....

ಗಣೇಶ ಹಬ್ಬ ಬಂತೆಂದರೆ ಅದೊಂದು "ಹಬ್ಬ" ವೇ ಸರಿ. ಹಿಂದೆ ಎಲ್ಲಾ ಮನೆಮನೆಯಲ್ಲೂ ಗೌರಿ ಗಣೇಶರನ್ನು ತಂದು ಕೂರಿಸಿ ಅಕ್ಕ ಪಕ್ಕದ ಮನೆಯವರನ್ನೆಲ್ಲಾ ಕುಂಕುಮಕ್ಕೆಂದು ಕರೆಯುವ ರೂಢೀಇತ್ತು(ಈಗಲೂ ಇದ್ದರೂ ನಾವಿರುವ ಬೆಂಗಳೂರಿನಲ್ಲಿ ಸದ್ಯ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ಗೊತ್ತಿದ್ದರೇ ಹೆಚ್ಚು.
ಚಿಕ್ಕವರಿದ್ದಾಗ ಈ ಹಬ್ಬ ಬಂತೆಂದರೆ ಮೊದಲನೆಯ ಸಂತೋಷದ ವಿಷಯ - ಶಾಲೆಯ ರಜೆ! ಸ್ವಾತಂತ್ರ್ಯ ದಿನದ ನಂತರದ  ಮೊದಲನೆಯ ಸರ್ಕಾರಿ ರಜೆ ಬಹುಶ್ಯ ಇದೇ  ಇರುತ್ತದಾದ್ದರಿಂದ ಎಲ್ಲರೂ ಅದಕ್ಕಾಗಿ ಕಾಯುತ್ತಿದ್ದೆವು. ಇನ್ನೂ ಆಗೆಲ್ಲಾ ಸುಮ್ಮನೇ ಹೋಗಿ ಎಂದೂ ಹೊಸ ಬಟ್ಟೆ ಕೊಂಡವರಲ್ಲ ನಾವು....ಹಬ್ಬ ಹರಿದಿನ ಶುರು ಆಯಿತೆಂದರೆ ಹೊಸ ಬಟ್ಟೆಗಳ ಕೊಳ್ಳುವಿಕೆ ಶುರು ಹಾಗೂ ಬಟ್ಟೆ ಅಂಗಡಿಯವರಿಗೆ ನಿಜವಾದ ಅರ್ಥದಲ್ಲಿ ಹಬ್ಬ.
ಇನ್ನೂ ಸಿಹಿ ತಿಂಡಿಗಳ ವಿಷಯದಲ್ಲಂತೂ ಹಬ್ಬವೆ ... ಗಣೇಶನಿಗೆ ನೈವೇದ್ಯಕ್ಕೆಂದು ಅಮ್ಮ ಸಿದ್ದಪಡಿಸುತ್ತಿದ್ದ ತಿಂಡಿಗಳನ್ನು ನಮ್ಮ ನೈವೇಧ್ಯಕ್ಕೆ ಕದ್ದು ಮುಚ್ಚಿ ಹಾರಿಸುತ್ತಿದ್ದ ಆ ದಿನಗಳಲ್ಲಿ ಎಷ್ಟು ಮಜ ಸಿಗ್ತಿತ್ತು... ಆದರೆ ಇಂದಿನ ಲೈಫ್‌ಸ್ಟೈಲ್ ನಿಂದಾಗಿ ಏನು ತಿನ್ನೋಕೆ ಮುಂಚೆಯೂ ಎರಡು ಸಾರಿ ಯೋಚಿಸುವಂತಾಗಿದೆ.

ಈ ಹಬ್ಬದ ಇನ್ನೊಂದು ವಿಶಿಷ್ಟ ಸಂಗತಿಯೆಂದರೆ ಬೀದಿ ಬೀದಿಯಲ್ಲೂ ಪೆಂಡಲ್ ಹಾಕಿ ತರಾವರಿ ಗಣೇಶ ಕೂರಿಸಿ ಕಡಲೆ ಉಸುಲಿ ಪ್ರಸಾದ ಮಾಡಿ ಹಂಚುವುದು.
ಮುಂಚೆಯೆಲ್ಲಾ ಹಬ್ಬದ ದಿನ ಸಂಜೆಯಾಯಿತೆಂದರೆ ಸ್ನೇಹಿತರ ನಡುವೆ ಪೈಪೋಟಿ ಏರ್ಪಡುತಿತ್ತು. ಎಲ್ಲರೂ ತಮ್ಮ ಬೀದಿಯಿಂದ ಶುರುಮಾಡಿ ಎಷ್ಟು ಸಾಧ್ಯವಾಗುತ್ತೋ ಅಷ್ಟೂ ಬೀದಿಗಳಿಗೆ ಹೋಗಿ ವಿವಿಧ ರೂಪ, ನಾನಾ ಬಗೆಯ ಗಣೇಶನನ್ನು ನೋಡಿ ಯಾರು ೨೧ಕ್ಕಿಂತ ಹೆಚ್ಚು ನೋಡಿದೆವು ಎಂದು ಮಾತಿನಲ್ಲೆ ಸೂಪೀರಿಯಾರಿಟೀ  ತೋರಿಸಿ ಖುಷಿ  ಪಟ್ಟು, ನೋಡಿದ ಗಣೇಶಣ್ಣನು ತೋರಿಸಲು ಕರೆದುಕೊಂಡು ಹೋಗುತ್ತಿದ್ದೆವು. ಇದೊಂದು ದಿನ ಮಾತ್ರ ತಾಯಂದಿರು ಬೀದಿ ಸುತ್ತುವ ಮಕ್ಕಳಿಗೆ ಒಪ್ಪಿಗೆ ನೀಡಿ ಕಳಿಸುತಿದ್ದರು.

ಈ ಹಬ್ಬದ ಒಂದು ಸೊಬಗೆಂದರೆ ಇದು ಕೇವಲ ಒಂದು ಮನೆಯ ಪೂಜೆಯಾಗಿ ಉಳಿಯದೆ ಒಂದು ಪ್ರದೇಶದ ಜನರನ್ನು ಒಟ್ಟುಗೂಡಿಸುವ ಶಸ್ತ್ರವೂ ಹೌದು.(ಈ ಹಬ್ಬವನ್ನು ಸಾಮಾಜಿಕ ಸಾಮೂಹಿಕ ಹಬ್ಬವನ್ನಾಗಿ ಮಾಡಿದ ತಿಲಕರಿಗೆ ನನ್ನ ನಮನ) ಹಾಗು ಚಪ್ಪಾಳೆ ತಟ್ಟುವಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಂದರ್ಭ ಕೂಡ.

ಕರ್ತವ್ಯದ ನಿಮಿತ್ತ ತಂದೆಯವರಿಗೆ ಬೇರೆ ಊರಿಗೆ ವರ್ಗಾವಣೆಯಾದಾಗ ನೋವಾಗಿದ್ದುಂಟು. ಆದರೆ ಅಲ್ಲಿನ ಸಡಗರಗಳಲ್ಲಿ ಪಾಲ್ಗೊಂಡು ಬೆಳೆದಂತೆ ಅದು ಮರೆಯಾಗಿತ್ತು. ಒಮ್ಮೆ ಗಣೇಶನೊಂದಿಗೆ ಟ್ರ್ಯಾಕ್ಟರ್ ನಲ್ಲಿ ನಮ್ಮ ಕ್ಯಾಂಪಸ್ ಪೂರಾ ತಿರುಗಿದ ನೆನಪು ಇಂದು ನಮ್ಮ ಬೀದಿಯಲ್ಲಿ ಒಂದು ಗಣೇಶನ ಮೆರವಣಿಗೆ ನೋಡಿ ನೆನಪಾಗಿದೆ.

ಚಿಕ್ಕವಳಿದ್ದಾಗ ಆ ರೀತಿಯ ಸಡಗರವಾದರೆ, ಓದು ಮುಗಿಸಿ ಕೆಲಸ ಮಾಡಲು ಶುರುವಾದ ಮೇಲೆ ಈ ಹಬ್ಬವೂ ನನ್ನ ಕಲಾ ದಾಹಕ್ಕೆ ಒಂದು ಅವಕಾಶವಾಗಿ ಬರುತ್ತಿತ್ತು. ತರಾವರಿ ರಂಗೋಲಿ ಹಾಕಿ ಗಣೇಶನ ಚಿತ್ರ ಬಿಡಿಸಿ ಅದನ್ನು ನೋಡುವುದು ಬಾರಿ ಸಂತಸ ತರುತ್ತಿತ್ತು. ಬೆಂಗಳೂರಿನ ಕ್ವಾರ್ಟರ್ಸ್  ನಮಗೆ ಎಲ್ಲರ ಪರಿಚಯವೇನು ಅಷ್ಟಾಗಿ ಇರದಿದ್ದರೂ ಒಮ್ಮೆ ಅಲ್ಲಿನ ಹುಡುಗಿಯರೆಲ್ಲ ಸೇರಿ ಗಣೇಶನ ಪ್ರತಿಷ್ಟಾಪನೆ ಮಾಡುವ ಯೋಚನೆ ಮಾಡಿದ್ದೆವು. ಅದನ್ನು ನಮ್ಮ ನಮ್ಮ ತಂದೆ ತಾಯಂದಿರಿಗೆ ಹೇಳಿದ್ದೆ ತಡ ಎಲ್ಲರೂ ನಾ ಮುಂದು ತಾ ಮುಂದು ಎಂಬಂತೆ ಸಹಾಯಕ್ಕೆ ಬಂದು ನಾವು ಮನೆ ಮನೆಗೂ ಹೋಗಿ ಹಣ ಕೂಡಿಸಿ ಗಣೇಶನನ್ನು ಕೂರಿಸಿ, ಹೂವು, ತೋರಣ ಹಾಗೂ ರಂಗೋಲಿಗಳಿಂದ ಬೀದಿಯನ್ನು ಅಲಂಕರಿಸಿ, ತಾಯಂದಿರು ಮಾಡಿ ಕೊಟ್ಟ ಸಜ್ಜಿಗೆ ಪ್ರಸಾದವನ್ನು ಹಂಚಿ ಸಂಜೆಯ ಹೊತ್ತಿಗೆ ಅಲ್ಲಿನ ಎಲ್ಲ ಹಿರಿಯರು ಹಾಗೂ ಕಿರಿಯರಿಗೆ ಕೆಲವು ಆಟಗಳನ್ನು ಆಡಿಸಿ ಸಂಭ್ರಮದಿಂದ ಗಣೇಶನನ್ನು ಕಳಿಸಿಕೊಟ್ಟೆವು. ಹೀಗೆ ೩ ವರ್ಷ ಮಾಡಿದ ನಂತರ ಕಾರಾಣಾಂತರಗಳಿಂದ ಸುಮ್ಮನಾಗಿ ಬಿಟ್ಟೆವು.
ಇತ್ತೀಚೆಗೆ ಅಷ್ಟೊಂದು ಸಡಗರ ಕಾಣದಿದ್ದರೂ, ಅಲ್ಲಲ್ಲಿ ಪೆಂಡಲ್ ನೋಡಿ, " ಇಷ್ಟಾದರೂ ಉಳಿದು ಕೊಂಡಿದೆಯಲ್ಲ!" ಎಂದು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಈ ಬಾರಿ ಮದುವೆಯಾದ ಮೊದಲ ಗೌರಿ ಹಬ್ಬವಾದರೂ, ಕೆಲಸ ನಿಮಿತ್ತ ಪರದೇಶಕ್ಕೆ ತೆರಳಿರುವ ಪತಿಯಿಂದಾಗಿ ತುಸು ಬೇಗವೇ ಅಮ್ಮನ ಮನೆಗೆ ಬಂದು ಸೇರಿಕೊಂಡರೂ ಹಬ್ಬದ ದಿನ ಊರಲ್ಲಿ ಇರದಿದ್ದುದರಿಂದ ಈ ಬಾರಿಯ ಹಬ್ಬವೂ ಇಲ್ಲದಂತಾಯಿತು. ಹಬ್ಬ ಬಂತೆಂದರೆ ಅಮ್ಮ ಬೇಗ ಎದ್ದೇಳು ಎಂದು ತಲೆ  ತಿನ್ನುತ್ತಾಳೇ ಎಂದು ಸಿಡಿಮಿಡಿಗೊಳ್ಳುತ್ತಿದ್ದ  ನಾನು ಈ ಬಾರಿಯ ಹಬ್ಬ ಸವಿಯಲಾಗಾದಿದ್ದಾಗ, ವಿದೇಶದಲ್ಲಿನ ಸ್ನೇಹಿತರು ತಾವು ಅಲ್ಲಿ ಪುಟ್ಟ ಗಣೇಶನನ್ನು ಪೂಜೆ ಮಾಡಿ, ಫೋಟೋಗಳನ್ನು ಹಂಚಿಕೊಂಡಾಗ ನಾನು ಈ ಬಾರಿ ಕಳೆದುಕೊಂಡ ಹಬ್ಬದ ಮೌಲ್ಯ ಅರಿವಾಯಿತು. ಹಬ್ಬಗಳು ನಾವು ಭಾರತೀಯರ ಒಂದು ಅಂಗ ಎನ್ನುವ ಮಾತು ಎಷ್ಟು ನಿಜ ಎನ್ನುವುದು ತಿಳಿಯಿತು. " ತೆ ಫ್ಯೂಚರ್ ಆಫ್ ಆ ಕಂಟ್ರೀ ಲೈಸ್ ಇನ್ ತೆ ಹ್ಯಾಂಡ್ಸ್ ಆಫ್ ಯೂತ್"  ಪುಣ್ಯಾತಮರು ಹೇಳಿದ್ದು ಕೇವಲ ರಾಜತಾಂತ್ರಿಕ ವಿಷಯಕ್ಕೆ ಮಾತ್ರವಲ್ಲದೆ ನಮ್ಮ ದೇಶದ ಸಂಸ್ಕೃತಿ ಕಲೆಯ ಉಳಿವಿಗಾಗಿ ಸಹ ಎಂದು ಅರಿವಾಗಿ ಇನ್ನು ಮುಂದೆ ಎಂದೂ ಸಹ ಹಬ್ಬಗಳನ್ನ ಮಿಸ್ ಮಾಡಬಾರದೆಂದು ಅಂದು ಕೊಂಡಿದ್ದೇನೆ.
ಸರಿ ಈಗಷ್ಟೇ ಶ್ರಾವಣ ಮುಗಿದಿದೆ, ಪಿತೃ ಪಕ್ಷ ಶುರುವಾಗುತ್ತಿದೆ.,... ದಸರ ಹಬ್ಬ, ಜಂಬೋ ಮೆರವಣಿಗೆಯ ದಿನಗಳು ಬೆರಳೆಣಿಕೆಯಷ್ಟು ದೂರದಲ್ಲಿದೆ. ಓ ಇರಿ.... ಇನ್ನೂ ಗಣೇಶನ ಉತ್ಸವ ನಡೆಯುತ್ತಲೇ ಇದೆ. ಕೆಳಗಡೆ ಮೆರವಣಿಗೆ ಬರ್ತಾ ಇದೆ, ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇನೆ.... ನೀವು ಹೋಗಿ ಒಂದೆರಡು ಹೆಜ್ಜೆ ಹಾಕಿ ಗಣೇಶನನ್ನು ಬೀಳ್ಕೊಟ್ಟು ಬನ್ನಿ. ಮಿಸ್ ಆಗಿದ್ದರೆ, ಬೇಜಾರು ಮಾಡಿಕೊಳ್ಳಬೇಡಿ.... ದಸರಾದಲ್ಲಿ ದಾಂಡಿಯ ದರ್ಬಾರ್ ಇದ್ದೇ ಇರುತ್ತದೆ, ಅಷ್ಟರಲ್ಲಿ ಹೋಗಿ ಕೊಲಾಟಕ್ಕೆ ಕೋಲು ಕೊಂಡು ತನ್ನಿ....

Freeze the time, now!

There are often moments, which we want to be over as soon as possible and there are some moments which just flash like a falling star and y...